ಡಿಮೀಟ್ರಿಯಸ್ (ಮ್ಯಾಸಿಡೋನಿಯದ)

ಡಿಮಿಟ್ರಿಯಸ್ I : 	ಕ್ರಿ.ಪೂ. 336-283. ಮ್ಯಾಸಿಡೋನಿಯದ ದೊರೆ. ಆಂಟಿಗೂಸನ ಮಗ. ಕ್ರಿ.ಪೂ. 336ರಲ್ಲಿ ಜನಿಸಿದ. ಕ್ರಿ.ಪೂ. 321ರಲ್ಲಿ ಫಿಲ ಎಂಬವಳನ್ನು ವಿವಾಹವಾದ. ತನ್ನ ತಂದೆಯ ಆಳ್ವಿಕೆಯ ಕಾಲದಲ್ಲಿ ಅನೇಕ ವೈರಿಗಳ ವಿರುದ್ಧ ಯುದ್ಧನಿರತನಾಗಿದ್ದ. ಈಜಿಪ್ಟಿನ ಕ್ಷತ್ರಪ ಟಾಲಮಿಯ ವಿರುದ್ಧ ರಾಜ್ಯದ ಗಡಿಗಳನ್ನು ರಕ್ಷಿಸಲು ಸೈನ್ಯಸಮೇತವಾಗಿ ಹೋದ. ನುರಿತ ಯೋಧರ ಪಡೆಯೊಡನೆ ಹೋದಾಗ್ಯೂ ರಾಜ ಎಂಬಲ್ಲಿ ಸೋತ (312). ಅದೇ ವರ್ಷ ಅರೇಬಿಯ ಮತ್ತು ಸಿರಿಯದ ಪಡೆಯೊಡನೆ ಸೆಲ್ಯೂಕಸನೊಡನೆ ವಿಫಲ ಹೋರಾಟದಲ್ಲಿ ತೊಡಗಿದ್ದ. ಕ್ರಿ.ಪೂ. 307ರಲ್ಲಿ ಆತೆನ್ಸಿನ ರಕ್ಷಣೆಗಾಗಿ ಮುಂದುವರಿದು ಕ್ಯಸಾಂಡರನನ್ನು ಸೋಲಿಸಿ ಆತೆನ್ಸನ್ನು ಅವನ ಆಕ್ರಮಣದಿಂದ ವಿಮುಕ್ತಗೊಳಿಸಿದ. ಆತೆನ್ಸಿನ ಜನರ ವಿಶೇಷ ಮನ್ನಣೆ ಮರ್ಯಾದೆಗಳು ಡಿಮೀಟ್ರಿಯಸನಿಗೆ ದೊರೆತುವು. ಮರುವರ್ಷ ನೌಕಾ ಮತ್ತು ಭೂಕದನಗಳಲ್ಲಿ ಈಜಿಪ್ಟಿನ ಟಾಲಮಿಯನ್ನು ಸೈಪ್ರಸಿನ ಸಾಲಮಸ್ ಬಳಿ ಸೋಲಿಸಿದ. ಈ ವಿಜಯದಿಂದ ಡಿಮೀಟ್ರಿಯಸ್ ಮತ್ತು ಇವನ ತಂದೆ ಆಂಟಿಗೊನಸ್ ಹೊಸ ಬಿರುದುಗಳನ್ನು ಧರಿಸಿದರು. ಆದರೆ ಡಿಮೀಟ್ರಿಯಸ್ ಈಜಿಪ್ಟನ್ನು ಆಕ್ರಮಿಸಲು ಪ್ರಯತ್ನಪಟ್ಟು ವಿಫಲನಾದ. ತನ್ನ ತಂದೆಯ ಪ್ರಭಾವಕ್ಕೆ ರ್ಹೋಡ್ಸ್ ಒಳಪಡುವಂತೆ ಒತ್ತಾಯಪಡಿಸಲು ಕ್ರಿ.ಪೂ. 305ರಲ್ಲಿ ಇವನನ್ನು ಅಲ್ಲಿಗೆ ಕಳುಹಿಸಲಾಯಿತು. ಈ ಯತ್ನದಲ್ಲಿ ಡಿಮೀಟ್ರಿಯಸ್ ಯಶಸ್ವಿಯಾಗಲಿಲ್ಲ. ಆದರೆ ಈ ಮುತ್ತಿಗೆಯಲ್ಲಿ ವಿಶೇಷ ಸಾಹಸ ಮತ್ತು ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದರಿಂದ ಇವನು ಆಕ್ರಮಣವೀರ ಎಂದು ಪ್ರಸಿದ್ಧನಾದ. ಕ್ರಿ.ಪೂ. 304ರಲ್ಲಿ ಈತ ಕ್ಯಸಾಂಡರನನ್ನು ಸೋಲಿಸಿದ. ಕಾರಿಂತಿಯನ್ ಲೀಗ್ ಎಂಬ ಹೊಸ ರಾಜಕೀಯ ಒಕ್ಕೂಟವನ್ನು ಸ್ಥಾಪಿಸುವುದು ಇವನ ಯೋಜನೆಯಾಗಿತ್ತು. ಕ್ಯಸಾಂಡರ್ ಬೇಷರತ್ತಾಗಿ ಶರಣಾಗತನಾಗುವಂತೆ ಇವನು ಪ್ರತಿಬಂಧಿಸಿದ. ಇದರಿಂದ ಕ್ಯಸಾಂಡರ್ ಕುಪಿತನಾಗಿ ತನ್ನ ಮಿತ್ರರಾಜರಾದ ತ್ರೇಸಿನ ಲೈಸಿಮಕಸ್, ಈಜಿಪ್ಟಿನ ಟಾಲಮಿ, ಸಿರಿಯದ ಸೆಲ್ಯೂಕಸ್ ಇವರು ಮ್ಯಾಸಿಡೋನಿಯದ ಬೇರೆ ಬೇರೆ ಪ್ರದೇಶಗಳ ಮೇಲೆ ಆಕ್ರಮಣ ನಡೆಸುವಂತೆ ಪ್ರಾರ್ಥಿಸಿಕೊಂಡ. ಅವನ ಮಿತ್ರು ಕ್ಯಸಾಂಡರನಿಗೆ ಸಹಾಯಮಾಡುವ ಉದ್ದೇಶದಿಂದ ಮ್ಯಾಸಿಡೋನಿಯಕ್ಕೆ ಸೇರಿದ್ದ ಏಷ್ಯ ಮೈನರ್ ಪ್ರದೇಶವನ್ನು ಆಕ್ರಮಿಸಿದರು. ಇದರಿಂದ ಆಂಟಿಗೂನಸ್ ಅವರನ್ನು ಎದುರಿಸಲು ಏಷ್ಯ ಮೈನರಿಗೆ ಹೋದ. ಡಿಮೀಟ್ರಿಯಸ್ ಸೈನ್ಯಸಮೇತನಾಗಿ ತಂದೆಯ ಸಹಾಯಕ್ಕೆ ಅಲ್ಲಿಗೆ ಧಾವಿಸಬೇಕಾಯಿತು. ಕ್ರಿ.ಪೂ. 301ರಲ್ಲಿ ಸೆಲ್ಯೂಕಸ್ ಮತ್ತು ಲೈಸಿಮಕಸ್ ಇವರು ಒಟ್ಟಾಗಿ ಆಂಟಿಗೊನಸ್ ಮತ್ತು ಡಿಮೀಟ್ರಿಯಸರನ್ನು ಮಧ್ಯ ಫ್ರಿಜಿಯದ ಇಪ್ಸಸ್ ಎಂಬಲ್ಲಿ ಎದುರಿಸಿದರು. ಸೆಲ್ಯೂಕಸ್ ಭಾರತದಿಂದ ಪಡೆದಿದ್ದ ಹಸ್ತಿಬಲ ಈ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಡಿಮೀಟ್ರಿಯಸನೂ ಆಂಟಿಗೊನಸನೂ ಯುದ್ಧರಂಗದಲ್ಲಿ ಬೇರೆ ಬೇರೆ ವಲಯಗಳಲ್ಲಿ ಸೆಣಸುತ್ತಿದ್ದರು. ಡಿಮೀಟ್ರಿಯಸ್ ಪರಾಕ್ರಮದಿಂದ ಹೋರಾಟದಲ್ಲಿ ತೊಡಗಿದ್ದಾಗ ಇವನ ತಂದೆ ಸೋತು ಮರಣ ಹೊಂದಿದ. ಮ್ಯಾಸಿಡೋನಿಯದ ಸೈನ್ಯ ದಿಕ್ಕೆಟ್ಟು ಓಡಿತು. ಶತ್ರುಗಳು ರಾಜ್ಯವನ್ನು ಆಕ್ರಮಿಸಿದರು. 

	ಇಪ್ಸನ್ ಕದನದ ಭಾರಿ ಅನಾಹುತದಿಂದ ಡಿಮೀಟ್ರಿಯಸ್ ಪ್ರಾಣಸಹಿತ ಪಾರಾದ. ವಿಜಯಿಗಳು ಮ್ಯಾಸಿಡೋನಿಯ ರಾಜ್ಯದ ಹಂಚಿಕೆಗೆ ಸಂಬಂದಿಸಿದಂತೆ ವಿಜಯಿಗಳಲ್ಲಿ ಭಿನ್ನಾಭಿಪ್ರಾಯ ಉಂಟಾದ್ದರಿಂದ ಸ್ವಲ್ಪ ಕಾಲದಲ್ಲೆ ಡಿಮೀಟ್ರಿಯಸ್ ಚೇತರಿಸಿಕೊಂಡು ತನ್ನ ತಂದೆಯ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸಲು ಯತ್ನಿಸಿದ. ಒಂದು ನೌಕಾದಳ ಮತ್ತು ಕೆಲವೇ ನೆಲೆಗಳು ಇವನ ವಶದಲ್ಲಿದ್ದುವು. ಡಿಮೀಟ್ರಿಯಸನ ಬಲ ಕ್ರಮೇಣ ಹೆಚ್ಚಿತು. ಕ್ರಿ.ಪೂ. 294ರಲ್ಲಿ ಇವನು ಆತೆನ್ಸನ್ನು ಆಕ್ರಮಿಸಿ ವಶಪಡಿಸಿಕೊಂಡು ಮ್ಯಾಸಿಡೋನಿಯದ ಪ್ರಭುತ್ವವನ್ನು ಸ್ಥಿರಪಡಿಸಿಕೊಂಡ. ಅನಂತರ ಅನೇಕ ಯುದ್ಧಗಳಲ್ಲಿ ಪರಾಕ್ರಮವನ್ನು ಮೆರದ. ಆದರೆ ಕ್ರಿ.ಪೂ. 288ರಲ್ಲಿ ಪಿರಸ್ ಮತ್ತು ಲೈಸಿಮಕಸ್ ಇವರು ಒಂದುಗೂಡಿ ಡಿಮೀಟ್ರಿಯಸನನ್ನು ಮ್ಯಾಸಿಡೋನಿಯದಿಂದ ಓಡಿಸಿದರು. ಅದನ್ನು ಗ್ರೀಸಿನಿಂದ ಮತ್ತೆ ಪಡೆದುಕೊಳ್ಳುವ ಬದಲು ಇವನು ಏಷ್ಯ ಮೈನರ್‍ಗೆ ಧಾವಿಸಿದ. ಲೈಸಿಮಕಸ್ ಮತ್ತು ಸೆಲ್ಯೂಕಸರ ರಾಜ್ಯಗಳಲ್ಲಿ ಆಂತರಿಕವಾಗಿ ತೊಂದರೆ ಕೊಡುವುದು ಇವನ ಉದ್ದೇಶವಾಗಿತ್ತು. ಕೊನೆಗೆ ಇವನ ಆಪ್ತರ ಸಂಚಿನಿಂದಾಗಿ ಇವನ ನೌಕಾಬಲದೊಂದಿಗೆ ಸಂಪರ್ಕ ತಪ್ಪಿ, ಕ್ರಿ.ಪೂ. 285ರಲ್ಲಿ ಸಿಲಿಷಿಯದಲ್ಲಿ ಸೆಲ್ಯೂಕಸನಿಗೆ ಶರಣಾಗತನಾದ. ಸಿರಿಯದಲ್ಲಿ ಎರಡು ವರ್ಷಗಳ ಸೆರೆಮನೆಯಲ್ಲಿದ್ದು ಕ್ರಿ.ಪೂ. 283ರಲ್ಲಿ ಮರಣ ಹೊಂದಿದ. ಡಿಮೀಟ್ರಿಯಸ್ ತನ್ನ ತಂದೆಯ ಮೆಚ್ಚಿಕೆಗೆ ಪಾತ್ರನಾಗಿ ಇಪ್ಸನ್ ಕದನದಲ್ಲಿ ಕಳೆದು ಹೋದ ರಾಜ್ಯವನ್ನು ಪುನಃ ಸ್ಥಾಪಿಸಲು ನಿರಂತರವಾಗಿ ಹೋರಾಡಿ ಸೆರೆಮನೆಯಲ್ಲೂ ವೈರಿಯ ಮನ್ನಣೆಗೆ ಪಾತ್ರನಾಗಿದ್ದು ತೀರಿಕೊಂಡ. ಇವನು ವೀರಯೋಧನಾಗಿದ್ದಂತೆ ಭೋಗಾಸಕ್ತನೂ ಆಗಿದ್ದ ಇವನಿಗೆ ಹಲವು ಪತ್ನಿಯರೂ ಉಪಪತ್ನಿಯರೂ ಇದ್ದರು. 

ಡಿಮೀಟ್ರಿಯಸ್ II : 	ಕ್ರಿ.ಪೂ. ಸು. 276-229. ಮ್ಯಾಸಿಡೋನಿಯದ ದೊರೆ. ಆಂಟಿಗೊನಸ್ ಗಾನಟಾಸ್ ಮತ್ತು ಅವನ ರಾಣಿ ಫಿಲ ಇವರ ಮಗ. ಕ್ರಿ.ಪೂ. 239ರಲ್ಲಿ ರಾಜನಾಗಿ ಅಧಿಕಾರ ವಹಿಸಿದ. ತನ್ನ ತಂದೆಯ ಕಾಲದಲ್ಲಿ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದ. ಬಾಲ್ಯದಿಂದ ಯೌವನಕ್ಕೆ ಕಾಲಿಡುತ್ತಿದ್ದಾಗಲೇ ಎಪಿರಸಿನ ಅಲೆಕ್ಸಾಂಡರನನ್ನು ಸೋಲಿಸಿ, ಅವನಿಂದ ಮ್ಯಾಸಿಡೋನಿಯಕ್ಕೆ ಒದಗಿದ್ದ ಭೀತಿಯನ್ನು ನಿವಾರಿಸಿದ. ಕ್ರಿ.ಪೂ. 245ರಲ್ಲಿ ಕಾರಿಂತಿನ ರಾಜನಾಗಿದ್ದ ಅಲೆಕ್ಸಾಂಡರನ ವಿಧವೆಯನ್ನು ವಿವಾಹವಾಗಿ ಆಕ್ರೋಕಾರಿಂತ್ ಪ್ರದೇಶವನ್ನು ವಶಪಡಿಸಿಕೊಳ್ಳು ಯತ್ನಿಸಿದ. ತನ್ನ ತಂದೆಯ ಅನಂತರ ಕ್ರಿ.ಪೂ. 239ರಲ್ಲಿ ಗೆದ್ದುಗೆಗೇರಿದ. ಈಟೋಲಿಯನ್ ಮತ್ತು ಅಕೀಯನರೊಡನೆ ಯುದ್ಧ ಸಂಘಡಿಸಿತು. ಕ್ರಿ.ಪೂ. 236ರ ವರೆಗೂ ಈತ ಶತ್ರುಗಳನ್ನು ಪರಿಣಾಮಕಾರಿಯಾಗಿ ಎದುರಿಸಿದ. ಕ್ರಿ.ಪೂ. 231ರಲ್ಲಿ ಎಪಿರಸ್‍ನಲ್ಲಿ ಕ್ರಾಂತಿ ಸಂಭವಿಸಿ ಅಲ್ಲಿಯ ರಾಜಪ್ರಭುತ್ವ ಉರುಳಿ ಗಣರಾಜ್ಯ ಸ್ಥಾಪಿತವಾಯಿತು. ಅದು ಮ್ಯಾಸಿಡೋನಿಯದ ಸಂಬಂಧ ತೊರೆದು ಈಟೋಲಿಯನ್ ಮತ್ತು ಅಕೀಯನ್ ಲೀಗ್‍ಗಳ ಜೊತೆಗೂಡಿದುದರಿಂದ ಮ್ಯಾಸಿಡೋನಿಯ ಬಲಗುಂದಿತು. ಈ ಪರಿಸ್ಥಿತಿಯನ್ನು ಎದುರಿಸಲು ಡಿಮೀಟ್ರಿಯಸ್ ಇಲಿರಿಯದೊಡನೆ ಮೈತ್ರಿ ಒಪ್ಪಂದವೇರ್ಪಡಿಸಿಕೊಂಡು ಸ್ಥಾನವನ್ನು ಭದ್ರಪಡಿಸಿಕೊಳ್ಳು ಪ್ರಯತ್ನಿಸಿದ. ಆದರೆ ಆ ವೇಳೆಗೆ ತನ್ನ ರಾಜ್ಯದ ಗಡಿಗಳಲ್ಲಿ ಡಾರ್ಡೇನಿಯನರು ಆಕ್ರಮಣ ನಡೆಸಿದರು. ಅದನ್ನು ಎದುರಿಸಲು ಡಿಂಟ್ರಿಯಸ್ ಉತ್ತರಾಭಿಮುಖವಾಗಿ ಮುಂದುವರಿದು, ಸೋತು ಕ್ರಿ.ಪೂ. 229ರಲ್ಲಿ ಮರಣ ಹೊಂದಿದ.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ